ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅವರ ಎದುರೇ ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಕಮಲ್ ಹಾಸನ್ ನೀಡಿದ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದಲ್ಲದೇ, ಸೋಷಿಯಲ್ ಮಿಡಿಯಾದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.. ಹೌದು ಥಗ್ ಲೈಫ್ ಸಿನಿಮಾ ಇವೆಂಟ್ನಲ್ಲಿ ಶಿವಣ್ಣ ಭಾಗಿಯಾಗಿ ಬೆಂಬಲ ನೀಡಿದ್ದರು.. ಇದೇ ವೇಳೆ ಕಮಲ್ ಹಾಸನ್ ಅವರು ಡಾ.ರಾಜ್‌ಕುಮಾರ್ ಬಗ್ಗೆ ತಮಗಿರುವ ಅಭಿಮಾನ-ಗೌರವ ಹಂಚಿಕೊಂಡಿದ್ದರು. ಕನ್ನಡಿಗರ ಪ್ರೀತಿ ಹಾಗೂ ಅಭಿಮಾನಕ್ಕೆ ವಂದಿಸುತ್ತ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದು ಕಮಲ್ ಹೇಳಿಕೆ ನೀಡಿದ್ದಾರೆ.. ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಕಮಲ್ ಹಾಸನ್ ಅಭಿನಯದ ಥಗ್ಸ್ ಆಫ್ ಲೈಫ್ ಸಿನಿಮಾದ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಕೂಡಾ ಅತಿಥಿಯಾಗಿದ್ದರು.ಇದೇ ಕಾರ್ಯಕ್ರಮದಲ್ಲಿ ಶಿವಣ್ಣ ಎದುರಿನಲ್ಲೇ ಕಮಲ್ ಹಾಸನ್, ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂದಿದ್ದರು. ಇದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಪರ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಮಲ್ ಸಿನಿಮಾ ಬಿಡುಗಡೆಗೆ ನಿರ್ಬಂಧ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರ ನಡುವೆ ಇದೇ ಕಾರ್ಯಕ್ರಮದಲ್ಲಿ ಶಿವಣ್ಣ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಸುಮ್ಮನಿರಲಾರದೇ ಕಮಲ್ ಹಾಸನ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಅದರಲ್ಲೂ ಶಿವಣ್ಣನನ್ನು ಕರೆಸಿ, ಅವರ ಮುಂದೇನೆ ಕನ್ನಡ ಭಾಷೆಗೆ ಅವಮಾನ ಆಗುವ ಹಾಗೆ ಮಾತಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳಿನಿಂದಲೇ ಕನ್ನಡ ಭಾಷೆ ಹುಟ್ಟಿದ್ದು ಎಂದು ಹೇಳಿರುವ ಕಮಲ್ ಹಾಸನ್ ಹೇಳಿಕೆಗೆ ವ್ಯಾಪಕ ಖಂಡನೆಯಾಗುತ್ತಿದೆ.ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಕಮಲ್ ಹಾಸನ್ ಕೂಡ ಒಳ್ಳೆಯ ಮಾತಗಳನ್ನೇ ಆಡುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, ವೇದಿಕೆ ಮೇಲೆ ಆಗಿದ್ದೇ ಬೇರೆ.ಇನ್ನು ಕನ್ನಡಿಗರು ಆಕ್ರೋಶಗೊಂಡಿದ್ದರೂ, ಕಮಲ್ ಹಾಸನ್ ಇನ್ನೂ ಸ್ಪಷ್ಟನೆ ಕೊಡುವ ಮನಸ್ಸು ಕೂಡ ಮಾಡಿಲ್ಲ. ಹೀಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಫಿಲ್ಮ್ ಚೇಂಬರ್ ಮುಂಭಾಗದಲ್ಲಿ ಕಮಲ್ ಸಿನಿಮಾವನ್ನು ಬ್ಯಾನ್ ಮಾಡುವ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಶಿವಣ್ಣನ ಮುಂದೆಯೇ ಕನ್ನಡಕ್ಕೆ ಅವಮಾನ ಮಾಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಕ್ಷಮೆ ಕೇಳದೆ ಹೋದರೆ, ಮಾಲ್ ಹಾಗೂ ಥಿಯೇಟರ್‌ಗಳಿಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ.ಫಿಲ್ಮ್ ಚೇಂಬರ್ ಮುಂಭಾಗದಲ್ಲಿ ಅಧ್ಯಕ್ಷರ ಸಮ್ಮುಖದಲ್ಲಿಯೇ ಕಮಲ್ ಹಾಸನ್ ಕ್ಷಮೆ ಕೇಳಬೇಕು. ಇಲ್ಲವಾದರೇ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. “ಕನ್ನಡ ಚಿತ್ರರಂಗದ ಪರವಾಗಿ ಮಧ್ಯಸ್ಥಿಕೆಯನ್ನು ವಹಿಸಿಕೊಂಡು ಕಮಲ್ ಹಾಸನ್ ಸಿನಿಮಾವನ್ನು ಬ್ಯಾನ್ ಮಾಡಬೇಕು ಎನ್ನುವ ಒತ್ತಾಯವನ್ನು ಮಾಡುತ್ತಿದ್ದೇವೆ. ಬ್ಯಾನ್ ಮಾಡಿಲ್ಲ ಅಂದರೆ, ಯಾವುದೇ ಮಾಲ್‌ಗಳಲ್ಲಿ, ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ಅವಕಾಶವನ್ನು ಕೊಡುವುದಿಲ್ಲ” ಎಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.”ನಿನ್ನೆಯೂ ಅಷ್ಟೇ ಕಾರ್ಯಕ್ರಮದ ಸಮಯವನ್ನು ಬದಲಾವಣೆ ಮಾಡಿ ನಮಗೆ ದಾರಿ ತಪ್ಪಿಸುವಂತಹ ಕೆಲಸ ಮಾಡಿದ್ದಾರೆ. ಇಲ್ಲಾ ಅಂದಿದ್ದರೆ, ನಿನ್ನೆನೇ ತಕ್ಕ ಶಾಸ್ತಿಯನ್ನು ಮಾಡುತ್ತಿದ್ದಿ. ಈ ನೆಲದಲ್ಲಿ ಬಂದು, ಇಲ್ಲಿಯ ಹಣವನ್ನು ಸಂಪಾದನೆ ಮಾಡಿ, ದೋಚಿ, ತಮಿಳಿನಲ್ಲಿ ಸೋತವರಿಗೆ ಕನ್ನಡದಲ್ಲಿ ಹೆಸರು ಮಾಡಿಕೊಟ್ಟಿದ್ದೇವೆ. ಹೀಗಿದ್ದೂ ಕನ್ನಡಿಗರ ಮೇಲೆ ದಾಳಿ ಮಾಡುತ್ತಿರುವಾಗ ಕರ್ನಾಟಕ ರಕ್ಷಣಾ ವೇದಿಕೆ ಯಾವತ್ತೂ ಕೈ ಕಟ್ಟಿ ಕೂರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ.” ಎಂದು ಆಕ್ರೋಶ ಹೊರ ಹಾಕಿದ್ದಾರೆ.”ಕನ್ನಡ ಸಿನಿಮಾ ಸೊರಗಿ ಹೋಗುತ್ತಿದ್ದರೂ ಬೇರೆ ಭಾಷೆಯ ಸಿನಿಮಾಗಳನ್ನು ಕರ್ನಾಟಕದೊಳಗೆ ಬಿಟ್ಟುಕೊಂಡಿದ್ದೇವೆ. ಸರ್ಕಾರ ಮತ್ತು ವಾಣಿಜ್ಯ ಮಂಡಳಿ ಈ ಬಗ್ಗೆ ಮಧ್ಯಸ್ಥಿಕೆ ವಹಿಸಿ ಕೂಡಲೇ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು. ಯಾವುದೇ ಕಾರಣಕ್ಕೂ ಅವರು ಕನ್ನಡಿಗರ ಬಳಿ ಕ್ಷಮೆ ಕೇಳಬೇಕು. ಯಾಕೆ ನೀವು ಬೇರೆ ಭಾಷೆಯವರೊಂದಿಗೆ ಹೋಲಿಸುತ್ತೀರ. ಕನ್ನಡಿಗರು ಯಾವತ್ತಾದರೂ ನಿಮಗೆ ದ್ರೋಹ ಮಾಡಿದ್ದಾರಾ? ತಮಿಳುನಾಡಿನಲ್ಲಿ ನಿಮ್ಮ ಸಿನಿಮಾ ಓಡದೇ ಇದ್ದಾಗ ಕರ್ನಾಟಕದಲ್ಲಿ ಬೆಂಬಲ ಕೊಟ್ಟು ಸಿನಿಮಾ ಓಡುವಂತೆ ಮಾಡಿದ್ದು ಕನ್ನಡಿಗರು. ರಾಜಕೀಯದ ಅಸ್ಥಿರತೆ ಕಂಡುಕೊಂಡಿದ್ದೀರ, ಸಿನಿಮಾ, ವೈಯಕ್ತಿಕ ಜೀವನದಲ್ಲೂ ನಿಮಗೆ ಸ್ಥಿರವಿಲ್ಲ. 2 ಸಾವಿರಕ್ಕೂ ಹೆಚ್ಚು ಇತಿಹಾಸವಿರುವ ಕನ್ನಡದ ಬಗ್ಗೆ ರಾಜ್‌ಕುಮಾರ್ ಅವರ ಸ್ವರೂಪದಲ್ಲಿ ನೋಡುತ್ತಿರುವ ಶಿವಣ್ಣನ ಎದುರಿನಲ್ಲಿಯೇ ಈ ಮಾತನ್ನು ಹೇಳಿದ್ದೀರ.” ಎಂದು ಪ್ರವೀಣ್ ಶೆಟ್ಟಿ ಆಕ್ರೋಶ ಹೊರ ಹಾಕಿದ್ದಾರೆ.”ಬೆಂಗಳೂರಿಗೆ ಬಂದು ಕ್ಷಮೆ ಕೇಳಬೇಕು. ಸರ್ಕಾರವಿದೆ. ವಾಣಿಜ್ಯ ಮಂಡಳಿ ಇದೆ. ಸಾಹಿತ್ಯ ಪರಿಷತ್ತು ಇದೆ. ಎಲ್ಲರೂ ಸಹ ಧ್ವನಿ ಎತ್ತಬೇಕು. ಕನ್ನಡಿಗರ ಸಿನಿಮಾಗಳಿಗೆ ಕರ್ನಾಟಕದಲ್ಲಿ ಅವಕಾಶಗಳಿಲ್ಲ. ಬೇರೆ ಭಾಷೆಯ ಸಿನಿಮಾಗಳಿಗೆ ಮಣೆ ಹಾಕುತ್ತಿದ್ದಾರೆ. ಎರಡು ವಾರ ಆಯ್ತು ಅಂದರೆ, ಸಿನಿಮಾವನ್ನು ಎತ್ತಾಕುತ್ತಿದ್ದಾರೆ. ಇದನ್ನೆಲ್ಲ ಕೇಳುವವರು ಯಾರು? ಬರೀ ಮಾತಿನಲ್ಲಿ ಹೇಳಿದರೆ ಆಗಲ್ಲ. ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯ ಮಾಡುತ್ತಿದ್ದೇನೆ.” ಎಂದು ಪ್ರವೀಣ್ ಶೆಟ್ಟಿ ಆಕ್ರೋಶ ಹೊರ ಹಾಕಿದ್ದಾರೆ.
ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಟ ಕಮಲ್ ಹಾಸನ್ ಅವರಿಗೆ ಕನ್ನಡದ ಇತಿಹಾಸದ ಬಗ್ಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣಗೌಡ ಖಂಡನೆ’ನಟ, ರಾಜಕಾರಣಿ ಕಮಲ್ ಹಾಸನ್ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು. ದುರುದ್ದೇಶಪೂರಿತ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಈ ಹೇಳಿಕೆ ಕಮಲ್ ಹಾಸನ್ ಅವರ ಅಜ್ಞಾನವನ್ನು ಬಯಲುಗೊಳಿಸುತ್ತದೆ. ಕನ್ನಡ ಮತ್ತು ತಮಿಳು ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದರೂ, ಇವು ತಮ್ಮದೇ ಆದ ಸ್ವತಂತ್ರ ಇತಿಹಾಸ, ಸಾಹಿತ್ಯ, ಸಂಸ್ಕೃತಿಯನ್ನು ಹೊಂದಿವೆ’ ಎಂದಿದ್ದಾರೆ ಅವರು.

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…