ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪೌರಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ “ಕೃಷ್ಣ” ಎಂಬಾತನಿಗೆ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಿರಿಯ ಆರೋಗ್ಯ ಪರಿವೀಕ್ಷಕರ (JHI) ಹುದ್ದೆಯಲ್ಲಿ ನಿಯೋಜಿಸಲಾಗಿತ್ತಲ್ಲದೇ, ಆತನೊಬ್ಬನಿಗೇ 03 ವಾರ್ಡ್ ಗಳಲ್ಲಿ ಪ್ರಭಾರಿ ಕಿರಿಯ ಆರೋಗ್ಯ ಪರಿವೀಕ್ಷಕ ಹುದ್ದೆಯನ್ನು ದಯಪಾಲಿಸಲಾಗಿತ್ತು.
ಸಚಿವ ದಿನೇಶ್ ಗುಂಡೂರಾವ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೃಷ್ಣ ಎಂಬ ಪಾಲಿಕೆ ನೌಕರ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರು ಪಾಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿರುವುದಾಗಿ ದಾಖಲೆಗಳನ್ನು ಸೃಷ್ಟಿಸಿ, ತನ್ನ ಹೆಂಡತಿ ಸುನಿತಾ E. K. ಮತ್ತು ತನ್ನ ಭಾವಮೈದುನ ಚಂದ್ರಶೇಖರ್ E. K. ರವರ ಹೆಸರಿನಲ್ಲಿ ನಿಯಮಬಾಹಿರವಾಗಿ ಕಾರ್ಯಾದೇಶ ಪತ್ರಗಳನ್ನು ಪಡೆದು, ಪ್ರತಿ ತಿಂಗಳು ಹತ್ತಾರು ಲಕ್ಷ ರೂಪಾಯಿಗಳಷ್ಟು ಹಣವನ್ನು ಪಾಲಿಕೆಯಿಂದ ಅಕ್ರಮವಾಗಿ ಪಡೆಯುತ್ತಿದ್ದನಲ್ಲದೇ, ಪಾಲಿಕೆಯ ಪಶ್ಚಿಮ ವಲಯದ ವಲಯ ಆಯುಕ್ತರ ಕಛೇರಿಯಲ್ಲಿ ಮತ್ತು ಗಾಂಧಿನಗರ ವಿಭಾಗದ ಕಾಮಗಾರಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಘನ ತ್ಯಾಜ್ಯ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಅಧಿಕಾರಿ / ನೌಕರರ ವಿರುದ್ಧ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಉಪಟಳವು ಮಿತಿ ಮೀರಿದ್ದರಿಂದ ಆತನ ವಿರುದ್ಧ ದಿನಾಂಕ 29/01/2025 ಮತ್ತು ದಿನಾಂಕ 03/02/2025 ರಂದು ದಾಖಲೆಗಳ ಸಹಿತ ದೂರುಗಳನ್ನು ನೀಡಲಾಗಿತ್ತು.
ಅದೇ ರೀತಿ ಪಶ್ಚಿಮ ವಲಯದ ಉಪ ಹಣಕಾಸು ನಿಯಂತ್ರಕರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ “ಲೋಕೇಶ್ವರಿ” ಎಂಬಾಕೆ ತನ್ನ ಪತಿ ರಾಮಚಂದ್ರ, ಮಾವ ಮುನಿಯಪ್ಪ ವಿ., ನಾದಿನಿ ವರಲಕ್ಷ್ಮಿ ಮತ್ತು ರಕ್ತ ಸಂಬಂಧಿ ನಿತ್ಯಾ ಸಿ. ರವರುಗಳ ಹೆಸರಿನಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುವ ಕಾರ್ಯಾದೇಶ ಪತ್ರಗಳನ್ನು ಪಡೆದು ಪ್ರತಿ ತಿಂಗಳು ಹತ್ತಾರು ಲಕ್ಷ ರೂಪಾಯಿಗಳನ್ನು ವಂಚಿಸುತ್ತಿದ್ದ ಬಗ್ಗೆ ದಾಖಲೆಗಳ ಸಹಿತ ದೂರುಗಳನ್ನು ನೀಡಲಾಗಿತ್ತು.
ಈ ಸಂಬಂಧ ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರು ದಿನಾಂಕ 03/02/2025 ರಂದು ಇವರಿಬ್ಬರ ವಿರುದ್ಧ ತನಿಖಾ ವರದಿ ನೀಡುವಂತೆ ಪಾಲಿಕೆಯ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರಾದ ಶ್ರೀ ವಿಕಾಸ್ ಸುರಲ್ಕರ್, IAS ಅವರಿಗೆ ಆದೇಶವನ್ನು ನೀಡಿದ್ದರು.
ಪಶ್ಚಿಮ ವಲಯ ಮತ್ತು ಗಾಂಧಿನಗರ ವಿಭಾಗದ ಎಲ್ಲಾ ಅಧಿಕಾರಿಗಳ ಸಮಗ್ರ ವಿಚಾರಣೆ ನಡೆಸಿದ ವಿಶೇಷ ಆಯುಕ್ತರಾದ ವಿಕಾಸ್ ಸುರಲ್ಕರ್ ರವರು ನೀಡಿರುವ ವರದಿಯನ್ನು ಆಧರಿಸಿ ಮಾನ್ಯ ಮುಖ್ಯ ಆಯುಕ್ತರು ದಿನಾಂಕ 21/04/2025 ರಂದು ಆದೇಶವನ್ನು ಹೊರಡಿಸಿದ್ದು, ಸದರಿ ಆದೇಶದಂತೆ ಶ್ರೀಮತಿ “ಲೋಕೇಶ್ವರಿ” – ಪ್ರಥಮ ದರ್ಜೆ ಸಹಾಯಕರು ಉಪ ಹಣಕಾಸು ನಿಯಂತ್ರಕರ ಕಛೇರಿ, ಪಶ್ಚಿಮ ವಲಯ ಮತ್ತು “ಕೃಷ್ಣ” – ಪ್ರಭಾರಿ ಕಿರಿಯ ಆರೋಗ್ಯ ಪರಿವೀಕ್ಷಕರು, ವಾರ್ಡ್ ಸಂಖ್ಯೆ 109 (ಚಿಕ್ಕಪೇಟೆ ವಾರ್ಡ್), ವಾರ್ಡ್ ಸಂಖ್ಯೆ 77 (ದತ್ತಾತ್ರೇಯ ವಾರ್ಡ್) ಹಾಗೂ ವಾರ್ಡ್ ಸಂಖ್ಯೆ 120 (ಕಾಟನ್ ಪೇಟೆ ವಾರ್ಡ್) ಇವರನ್ನು ಕೂಡಲೇ ಜಾರಿಗೆ ಬರುವಂತೆ “ಇಲಾಖಾ ವಿಚಾರಣೆ” ನಿರೀಕ್ಷಿಸಿ, “ಸೇವೆಯಿಂದ ಅಮಾನತು” ಪಡಿಸಲಾಗಿರುತ್ತದೆ
ಅಲ್ಲದೇ, ಶ್ರೀಮತಿ. ಲೋಕೇಶ್ವರಿ ಅವರನ್ನು ದಾಸರಹಳ್ಳಿ ವಿಭಾಗದ ಆರೋಗ್ಯ ವೈದ್ಯಾಧಿಕಾರಿ ಕಛೇರಿಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಹುದ್ದೆ ಮತ್ತು ಕೃಷ್ಣ ಅವರನ್ನು ಯಲಹಂಕ ವಿಭಾಗದಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗೆ ನಿಯೋಜಿಸಿ ಅಲ್ಲಿಂದಲೇ ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಜೀವನಾಧಾರ ಭತ್ಯೆ ಪಡೆಯಲು ಆದೇಶಿಸಿದ್ದಾರೆ.
— ರಮೇಶ್ ಎನ್. ಆರ್.
ಮಾಜಿ ಅಧ್ಯಕ್ಷರು,
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ
ಹಾಗೂ
ಆಡಳಿತ ಪಕ್ಷದ ಮಾಜಿ ನಾಯಕರು, ಬಿಬಿಎಂಪಿ

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…