November 4, 2025

*ಕಟ್ಟಡ ನಕ್ಷೆ ಅನುಮತಿ, ಸ್ವಾಧೀನ ಪ್ರಮಾಣ ಪತ್ರವಿಲ್ಲದೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ! ಸುಪ್ರೀಂ ಕೋರ್ಟ್ ತೀರ್ಪು…

ಕಟ್ಟಡ ನಕ್ಷೆ ಅನುಮತಿ, ಸ್ವಾಧೀನ ಪ್ರಮಾಣ ಪತ್ರವಿಲ್ಲದೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಹೀಗಾಗಿ ಜನರು ಈ ಅನುಮತಿಗಳು ಇಲ್ಲದೆ ಮನೆ ಕಟ್ಟಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಅವರು, ಇಡೀ ದೇಶಕ್ಕೆ ಈ ತೀರ್ಪು ಆನ್ವಯವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಇದುವರೆಗೂ 2.50 ಲಕ್ಷ ಜನ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಅನುಮತಿ ಪಡೆಯದೇ ಮನೆ ಕಟ್ಟಿಕೊಂಡು, ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ಕಾನೂನು ಸಲಹೆಗಾರರ ಜತೆ ಈ ವಿಚಾರವಾಗಿ ಚರ್ಚಿಸಿ, ಸಾರ್ವಜನಿಕರಿಗೆ ಹೇಗೆ ನೆರವಾಗಬಹುದು ಎಂದು ಅಭಿಪ್ರಾಯ ಕೇಳಿದ್ದೇನೆ ಎಂದು ತಿಳಿಸಿದರು.

ಕೆಲವು ಸಾರ್ವಜನಿಕರು ಕೆಇಬಿಗೆ ಠೇವಣಿ ಪಾವತಿ ಮಾಡಿದ್ದು, ಈ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳ ಜತೆಗೂ ಚರ್ಚೆ ಮಾಡುತ್ತಿದ್ದೇವೆ. ಕಾನೂನು ತಜ್ಞರು ಈ ಸಮಸ್ಯೆ ಯಾವ ರೀತಿ ಬಗೆಹರಿಸಬಹುದು ಎಂದು ಪ್ರಯತ್ನ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಇದನ್ನು ಯಾವ ರೀತಿ ಬಗೆಹರಿಸಲಿದ್ದಾರೆ ಎಂದು ಮಾಹಿತಿ ಕಲೆಹಾಕುತ್ತೇವೆ. ಈ ಮಧ್ಯೆ ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಯಾರೂ ಮನೆ ಕಟ್ಟಬೇಡಿ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತೆ ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ಈ ವಿಚಾರದಲ್ಲಿ ಅಕ್ರಮವಾಗಿ ಮನೆ ಕಟ್ಟಿದರೆ ಸಕ್ರಮ ಮಾಡುವುದು ಕಷ್ಟ. ನೀರು ಹಾಗೂ ವಿದ್ಯುತ್ ಸಂಪರ್ಕ ಸಿಗುವುದಿಲ್ಲ ಎಂದು ತಿಳಿಸಿದರು.

ಬೇರೆ ರಾಜ್ಯದಲ್ಲಿ ಇದು ಜಾರಿಯಾಗಿಲ್ಲ, ನಮ್ಮ ರಾಜ್ಯದಲ್ಲಿ ಆತುರದಲ್ಲಿ ಜಾರಿ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನ್ಯಾಯಾಲಯದ ಆದೇಶ ಬಂದ ನಂತರ ಕೆಆರ್ ಸಿ ಯಿಂದ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಲಾಗಿದೆ. ನೀವು ಆತುರದ ನಿರ್ಧಾರ ಎಂದು ಹೇಳಬಹುದು. ಆದರೆ ಅಧಿಕಾರಿಗಳು ತಮಗೆ ಮುಂದೆ ತೊಂದರೆ ಆಗಬಾರದು ಎಂದು ಮೈಗೆ ಎಣ್ಣೆ ಹಚ್ಚಿಕೊಂಡಿರುತ್ತಾರೆ. ನಮ್ಮ ಮೇಲೆ ಹಾಕುತ್ತಾರೆ. ಹೀಗಾಗಿ ಈ ಸಮಸ್ಯೆ ಬಗೆಹರಿಸಲು ನಾವು ಮುಂದಾಗಿದ್ದೇವೆ. ಕಾನೂನು ಚೌಕಟ್ಟಿನಲ್ಲೇ ನಾವು ಜನರಿಗೆ ಸಹಾಯ ಮಾಡಬೇಕು ಎಂದು ಸ್ಪಷ್ಟನೆ ನೀಡಿದರು.

ಅಕ್ರಮವಿದ್ದರೂ ನೀರಿನ ಸಂಪರ್ಕ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು ಎಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿ, ಈ ಹಿಂದಿನ ಆದೇಶ ಮುಖ್ಯವೋ, ಈಗ ಹೊರಡಿಸಿರುವ ಆದೇಶ ಮುಖ್ಯವೋ? ಇದೇ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಿದ ಕಾರಣ ವಿಚಾರಣೆ ಮಾಡಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಜೊತೆಗೆ ಇದನ್ನು ಜಾರಿಗೊಳಿಸುವಂತೆಯೂ ಆದೇಶ ನೀಡಿದೆ ಎಂದು ತಿಳಿಸಿದೆ.

ಅಕ್ರಮ ಸಕ್ರಮ ಬಿಲ್ ತರಬಹುದಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಈ ಬಿಲ್ ಗೆ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ತಡೆಹಿಡಿಯಲಾಗಿದೆ. ನಮ್ಮ ಸರ್ಕಾರ ಎ ಖಾತಾ, ಬಿ ಖಾತ ಎಲ್ಲ ಸಮಸ್ಯೆ ಬಗೆಹರಿಸಲು ಚರ್ಚೆ ಮಾಡುತ್ತಿದೆ. 110 ಹಳ್ಳಿಗಳಿಗೆ ನೀರಿನ ಸಂಪರ್ಕ ನೀಡಲು ಮುಂದಾಗಿದ್ದೆವು. ಈ ತೀರ್ಪಿನ ನಂತರ ಬಿಡ್ಬ್ಲ್ಯೂಎಸ್‌ಎಸ್ ಬಿಗೆ ತೊಂದರೆಯಾಗಿದೆ. ಕಳೆದ ವರ್ಷ ಈ ತಿಂಗಳಲ್ಲಿ 39 ಸಾವಿರ ನೀರಿನ ಸಂಪರ್ಕ ನೀಡಿದ್ದೆವು. ಈ ವರ್ಷ ಕೇವಲ 300 ಸಂಪರ್ಕ ನೀಡಿದ್ದೇವೆ. ಈ ವಿಚಾರವಾಗಿ ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.

error: Content is protected !!