November 4, 2025

ಜೀವನದಲ್ಲಿ ಯಶಸ್ಸು ಗಳಿಸಲು ವಿದ್ಯೆಯ ಜೊತೆಗೆ ಆತ್ಮವಿಶ್ವಾಸವು ಬಹಳ ಮುಖ್ಯ

  1. *ಶಿಕ್ಷಣದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿ*
  2. ನರೇಗಲ್ಲ ಜೂ.15: ಜೀವನದಲ್ಲಿ ಯಶಸ್ಸು ಗಳಿಸಲು ವಿದ್ಯೆಯ ಜೊತೆಗೆ ಆತ್ಮವಿಶ್ವಾಸವು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಅಂತರಾತ್ಮದ ಅರಿವಿನ ಮೂಲಕ ನಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಸರಕಾರಿ ಪಿಯು ಪ್ರಾಚಾರ್ಯ ಎಸ್.ಸಿ. ಗುಳಗಣ್ಣವರ ಹೇಳಿದರು.

ಅವರು ನರೇಗಲ್ಲ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ರೋವರ್ಸ್, ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿ, ಕಲಿತ ಶಾಲೆ, ಕಲಿಸಿದ ಗುರು ಮತ್ತು ಹೊತ್ತ ಭೂಮಿಯ ಋಣ ತೀರಿಸಬೇಕಾದರೆ ಸಮಾಜ ಮೆಚ್ಚುವ ರೀತಿಯಲ್ಲಿ ಉತ್ತಮ ಪ್ರಜೆಗಳಾಗಬೇಕು. ಹಾಗೆ ಸಾಧಕರಾಗಬೇಕಾದರೆ ಅಧ್ಯಯನಶೀಲ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ವೈಯಕ್ತಿಕ ಬೆಳವಣಿಗೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಪ್ರಗತಿ ಬಗ್ಗೆಯೂ ವಿದ್ಯಾರ್ಥಿ, ಯುವಜನರಿಗೆ ಜವಾಬ್ದಾರಿ ಇರಬೇಕು. ಓದುವ ಸಮಯದಲ್ಲಿ ಕಾಲಹರಣ ಮಾಡಿದರೆ ಕಷ್ಟ, ನೋವು ಕಟ್ಟಿಟ್ಟ ಬುತ್ತಿ ಎಂಬುದು ಮರೆಯಬಾರದು. ನೈತಿಕ ಮಾರ್ಗದಲ್ಲಿ ನಡೆದು ಗುರಿ ಸಾಧನೆ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ.ಎಸ್. ಧಡೆಸೂರಮಠ, ಪ್ರಾಂಶುಪಾಲ ಎಸ್.ಎಲ್. ಗುಳೇದಗುಡ್ಡ ಮಾತನಾಡಿದರು.

ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶರಣಪ್ಪ ಕುರಿ, ದಾವುದ್ ಅಲಿ ಕುದರಿ, ವೀರಪ್ಪ ಜಿರ್ಲ, ಆನಂದ ನಡುವಲಕೇರಿ, ಬಸೀರಾಬಾನು ಅಲ್ಲಾಬಕ್ಷಿ ನದಾಫ್, ರೇಣುಕಾ ಧರ್ಮಾಯತ, ಈ.ಆರ್. ಲಗಳೂರ, ಸಜಿಲಾ, ಸಾಂಸ್ಕೃತಿಕ ಸಂಚಾಲಕ ಎಸ್.ಎಸ್. ಸೂಡಿ, ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ, ಕ್ರೀಡಾ ವಿಭಾಗದ ಸಂಚಾಲಕಿ ಕಾಂಚನಮಾಲಾ ಪಾಟೀಲ, ಎನ್‌ಎಸ್‌ಎಸ್ ಸಂಚಾಲಕರಾದ ಎಸ್.ಪಿ. ಕುರೇರ, ಎಸ್.ಎಸ್. ಮುಂಜಿ ಇದ್ದರು. ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಸರಕಾರಿ ಪಿಯು ಪ್ರಾಚಾರ್ಯ ಎಸ್.ಸಿ. ಗುಳಗಣ್ಣವರ ಅವರನ್ನು ಸನ್ಮಾನಿಸಲಾಯಿತು.

error: Content is protected !!